ಬೆಂಗಳೂರು, ನ.೯: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಚಿವೆ ರಾಜೀನಾಮೆ ನೀಡಿದರು. ಅದನ್ನು ಬೆಂಗಳೂರಿನಲ್ಲಿ ಸೋಮವಾರ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿ ಸಲ್ಲಿಸಿದರು. ರಾಜಭವನ ರಾಜೀನಾಮೆಯನ್ನು ಅಂಗೀಕರಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.
ಕಳೆದ ಹದಿನೆಂಟು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರಕಾರದಲ್ಲಿ ಸಂಪುಟ ದರ್ಜೆಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ಶೋಭಾ ಕರಂದ್ಲಾಜೆ ನಿಭಾಯಿಸಿದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಸಂಘ ಪರಿವಾರದ ಮೂಲಕ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಬಿಜೆಪಿಯ ಮಹಿಳಾ ಮೋರ್ಚಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
೨೦೦೮ರ ಮೇ ತಿಂಗಳಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತ ಪುರ ಕ್ಷೇತ್ರದಿಂದ ಬಿಜೆಪಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಯಡಿಯೂರಪ್ಪನವರ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಸಚಿವೆ ಎಂಬ ಖ್ಯಾತಿಗೆ ಗುರಿಯಾಗಿದ್ದ ಶೋಭಾರಿಗೆ ಇದೇ ಮುಳುವಾಯಿತು. ಇತರ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಆರೋಪ ಪ್ರಮುಖವಾಗಿ ಶೋಭಾರ ವಿರುದ್ಧ ಕೇಳಿ ಬಂದಿದೆ. ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದ ಗಣಿಧಣಿಗಳು ಮತ್ತು ಇತರ ಶಾಸಕರು ಶೋಭಾರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಮುಖ್ಯಮಂತ್ರಿ ಯವರ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ರ ವರ್ಗಾವಣೆಗೆ ಪಟ್ಟು ಹಿಡಿದಿದ್ದರು. ಆರಂಭದಲ್ಲಿ ಇದನ್ನು ತಿರಸ್ಕರಿಸಿದ್ದ ಯಡಿಯೂರಪ್ಪ, ಅಂತಿಮ ಘಟ್ಟದಲ್ಲಿ ಕುರ್ಚಿ ತ್ಯಾಗ ಮಾಡಬೇಕಾಗುವ ಸನ್ನಿವೇಶ ಸೃಷ್ಟಿಯಾದಾಗ ಗಣಿಧಣಿಗಳ ಒತ್ತಡಕ್ಕೆ ಮಣಿದರು ಎಂದು ಹೇಳಲಾಗಿದೆ.
ಅದರಂತೆ ಮೂರು ದಿನಗಳ ಹಿಂದೆ ಹಿರಿಯ ಐಎಎಸ್ ಅಧಿಕಾರಿ ವಿ.ಪಿ.ಬಳಿಗಾರ್ರನ್ನು ವರ್ಗಾವಣೆ ಮಾಡಲಾಗಿತ್ತು. ನಿನ್ನೆ ಹೊಸದಿಲ್ಲಿಯಲ್ಲಿ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿನ ಷರತ್ತಿನಂತೆ ಇಂದು ಶೋಭಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಬಂಡಾಯವೆದ್ದಿದ್ದು ಹೈದರಾಬಾದ್ನ ನೋವೆಟೆಲ್ ಹೋಟೆಲ್ನಲ್ಲಿ ತಂಗಿದ್ದ ಶಾಸಕರು ಬೆಂಗಳೂರಿಗೆ ವಾಪಾಸಾಗುವ ಸಮಯಕ್ಕೆ ಸರಿಯಾಗಿ ಶೋಭಾ ಕರಂದ್ಲಾಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಮಹಿಳೆಯ ವಿರುದ್ಧ ನಡೆದ ಸಂಚು
ಬೆಂಗಳೂರು: ಈಗಿನ ರಾಜಕೀಯ ಪರಿಸ್ಥಿತಿಗೆ ಹೆದರಿ ಪಲಾಯನ ಮಾಡುವುದಿಲ್ಲ. ಸಚಿವೆಯಾಗಿ ಇಷ್ಟು ದಿನ ನೆರೆ ಸಂತ್ರಸ್ಥ ಪ್ರದೇಶದಲ್ಲಿ ಕೆಲಸ ಮಾಡಿದ್ದೇನೆ. ಇನ್ನು ಮುಂದೆ ಸಾಮಾನ್ಯ ಸಮಾಜ ಸೇವಕಿಯಾಗಿ ಅಲ್ಲಿ ಕೆಲಸ ಮಾಡುತ್ತೇನೆ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಶೋಭಾಕರಂದ್ಲಾಜೆ ಹೇಳಿದ್ದಾರೆ.
ಮುಖ್ಯಮಂತ್ರಿಗೆ ರಾಜೀನಾಮೆ ನೀಡಿದ ಬಳಿಕ ತಮ್ಮ ಸರಕಾರಿ ಬಂಗಲೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ರಾಜೀನಾಮೆಯಿಂದ ಸರಕಾರ ಸುಭದ್ರಗೊಳ್ಳುವುದಾದರೆ ಸಂತೋಷ. ಆದರೆ, ತಮ್ಮ ಪದತ್ಯಾಗಕ್ಕೆ ಭಿನ್ನಮತೀಯ ನಾಯಕರಾಗಲಿ ಅಥವಾ ಪಕ್ಷದ ವರಿಷ್ಠರಾಗಲಿ ಸರಿಯಾದ ಕಾರಣ ನೀಡಿಲ್ಲ ಎಂದು ಹೇಳಿದರು.
ಇನ್ನೆರಡು ದಿನಗಳ ನಂತರ ಮತ್ತೆ ಮಾಧ್ಯಮಗಳನ್ನು ಭೇಟಿ ಮಾಡಿ ರಾಜಕೀಯ ಕಾರಣಗಳು ಮತ್ತು ಘಟನಾವಳಿಗಳ ಕುರಿತು ವಿವರಣೆ ನೀಡುತ್ತೇನೆ ಎಂದು ಹೇಳಿದ ಅವರು, ಮಹಿಳೆಯಾಗಿದ್ದಕ್ಕೆ ನನಗೆ ಹೆಮ್ಮೆಯಿದೆ. ಈಗಿನ ಸನ್ನಿವೇಶದಲ್ಲಿ ಮಹಿಳೆ ಎಂಬ ಕಾರಣಕ್ಕೆ ನನ್ನ ಪದತ್ಯಾಗಕ್ಕೆ ಒತ್ತಡ ತರಲಾಗಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡು ಕೆವಲ ಎರಡು ಸ್ಥಾನಗಳನ್ನು ಮಾತ್ರ ಗಳಿಸಿದಾಗಲೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆತ್ಮಸ್ಥೆರ್ಯ ಕಳೆದುಕೊಳ್ಳಲಿಲ್ಲ. ಅವರು ತಮಗೆ ಆದರ್ಶ ತಾವು ಕೂಡ ಇದಕ್ಕೆಲ್ಲಾ ಹೆದರಿ ಪಲಾಯನ ಮಾಡುವುದಿಲ್ಲ ಸವಾಲಾಗಿ ಸ್ವೀಕರಿಸುತ್ತೇನೆ. ಇಂದಿರಾ ಗಾಂಧಿಯ ನಂತರ ಸಮರ್ಥ ಮಹಿಳಾ ನಾಯಕಿಯರು ರಾಜಕಾರಣದಲ್ಲಿ ನೆಲೆ ನಿಲ್ಲಲಿಲ್ಲ. ಪುರುಷರಷ್ಟೆ ಅಲ್ಲ ಮಹಿಳೆಯರು ರಾಜಕಾರಣದಲ್ಲಿ ಉತ್ತಮವಾಗಿ ಬೆಳೆಯಬಲ್ಲರು ಎಂಬುದನ್ನು ತೋರಿಸಬೇಕಿದೆ. ಹೆಚ್ಚು ಹೆಚ್ಚು ಮಹಿಳೆಯರು ರಾಜಕಾರಣಕ್ಕೆ ಬರಬೇಕು. ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಅದರಲ್ಲೂ ಮಹಿಳೆಯರು ಹೆಚ್ಚಾಗಿ ತಮ್ಮ ಬೆಂಬಲಕ್ಕೀದ್ದಾರೆ ಎಂದು ನಂಬುತ್ತೇನೆ. ನಿಮ್ಮೆಲ್ಲಾ ಸಂಕಷ್ಟಗಳಿಗೆ ನಾನು ಜೋತೆಯಾಗಿರುತ್ತೇನೆ. ನನ್ನ ಬಾವನೆಗಳಿಗೆ ನೀವು ಜೋತೆಯಾಗಿರಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯುದ್ದಕ್ಕೂ ಯಾವುದೇ ಆವೇಶ, ದುಖಃವಿಲ್ಲದೆ ಸಮಾಧಾನ ಚಿತ್ತದಿಂದ ಮಾತನಾಡಿದ ಶೋಭಾ ಕರಂದ್ಲಾಜೆ ವರಿಷ್ಠರು ರಾಜೀನಾಮೆ ಕೇಳಿದ್ದಕ್ಕಾಗಿ ನೋವಿದೆ. ಆದರೆ ಯಾವುದೇ ಬೇಸರವಿಲ್ಲದೆ ರಾಜೀನಾಮೆ ನೀಡಿದ್ದೇನೆ. ಯಶವಂತಪುರದ ಜನರ ಆಶೀರ್ವಾದದಿಂದ ತಮಗೆ ಸಚಿವೆಯಾಗುವ ಅವಕಾಶ ದೊರೆತಿತ್ತು ತಮ್ಮ ಕ್ಷೇತ್ರದ ಜನರನ್ನು ಈ ಕಾರಣಕ್ಕೆ ಅಭಿನಂದಿಸುವುದಾಗಿ ಹೇಳಿದರು. ರಾಜಕೀಯ ಬಿಕ್ಕಟ್ಟಿನಲ್ಲಿ ತಮ್ಮ ಬೆಂಬಲಕ್ಕಿದ್ದ ಬುದ್ದಿಜೀವಿಗಳು, ಪತ್ರಕರ್ತರಿಗೂ ಅವರು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.
ತಮ್ಮ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿರಲಿಲ್ಲ ಅಥವಾ ಕೆಲಸದಲ್ಲಿ ಅಸಮರ್ಥಳಾಗಿರಲಿಲ್ಲ. ಭಿನ್ನಮತೀಯರು ಯಾವ ಕಾರಣಕ್ಕೆ ರಾಜೀನಾಮೆ ಕೇಳಿದರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಕಳೆದ 18 ತಿಂಗಳಿನಿಂದ ಸಚಿವೆಯಾಗಿ ತಮ್ಮ ಸಾಧನೆಗಳ ಕುರಿತು ಸಂಕ್ಷೀಪ್ತ ವಿವರಣೆ ನೀಡಿದ ಶೋಭಾ ಕರಂದ್ಲಾಜೆ, ಗ್ರಾಮೀಣಾಭಿವೃದ್ಧಿ ಎಲ್ಲ ಕ್ಷೇತ್ರಗಳಲ್ಲೂ ನಿರ್ಲಕ್ಷಕ್ಕೆ ಒಳಗಾಗಿತ್ತು. ಕಳೆದ 60 ವರ್ಷಗಳಿಂದ ಒಂದುವರೆ ಲಕ್ಷ ಕಿ.ಮಿ. ರಸ್ತೆಯ ಪೈಕಿ 39ಸಾವಿರ ಕಿ.ಮೀ. ಮಾತ್ರ ಡಾಂಬರೀಕರಣವಾಗಿತ್ತು. ತಾವು ಒಂದು ಕಾಲು ವರ್ಷದಲ್ಲಿ ಮಹತ್ವದ ಸಾಧನೆ ಮಾಡಿದ್ದು ಸುಮಾರು 10 ಸಾವಿರ ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲರ ಮನೆಗೂ ಶೌಚಾಯಲ ನಿರ್ಮಿಸುವ ಗುರಿಯೊಂದಿಗೆ ಕಾಯೋನ್ಮುಖರಾಗಿದ್ದೆ. ರಾಷ್ಟ್ರಪತಿ ಅಬ್ದುಲ್ ಕಲಾಂ ಅಝಾದ್ರ ಕನಸಿ ಪುರ ಯೋಜನೆ ಜಾರಿಯ ಹಂತದಲ್ಲಿದೆ ಎಂದು ವಿವರಣೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಸ್ಪಷ್ಟಪಡಿಸಿದರು.
ಪ್ರಾಮಾಣಿಕತೆಗೆ ಬೆಲೆಯಿಲ್ಲ: ಯಡಿಯೂರಪ್ಪ

ಬೆಂಗಳೂರು, ನ.೯: ಪ್ರಾಮಾಣಿಕ ಸೇವೆ, ತ್ಯಾಗಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಷಾದಿಸಿದ್ದಾರೆ.
ರಾಜ್ಯಪಾಲರ ಎಚ್.ಆರ್.ಭಾರದ್ವಜ್ರನ್ನು ಭೇಟಿ ಮಾಡಲು ರಾಜಭವನಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವೆ ಶೋಭಾ ಕರಂದ್ಲಾಜೆಯವರನ್ನು ಸಂಪುಟದಿಂದ ಕೈಬಿಡುತ್ತಿರುವುದು ತಮಗೆ ಅತೀವ ನೋವುಂಟು ಮಾಡಿದೆ. ಸೇವೆ ಮತ್ತು ತ್ಯಾಗಕ್ಕೆ ಬೆಲೆ ಇಲ್ಲ. ರಾಜಕಾರಣದಲ್ಲಿ ಕೆಲವೊಮ್ಮೆ ಇಂತಹ ತ್ಯಾಗಗಳು ಅನಿವಾಯವಾಗುತ್ತವೆ. ಈ ಸಂದರ್ಭದಲ್ಲಿ ನಾನು ಹೆಚ್ಚು ಹೇಳುವ ಸ್ಥಿತಿಯಲ್ಲಿಲ್ಲ ಎಂದು ನುಡಿದರು.
ನಂತರ ಶೋಭಾ ಕರಂದ್ಲಾಜೆಯವರ ರಾಜೀನಾಮೆಯನ್ನು ಮುಖ್ಯಮಂತ್ರಿ ರಾಜ್ಯಪಾಲರಿಗೆ ರವಾನಿಸಿದರು.
ಬೆಂಗಳೂರಿಗೆ ಆಗಮಿಸಿದ ಭಿನ್ನಮತೀಯ ಶಾಸಕರು
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು ಕಳೆದ ಹದಿನೈದು ದಿನಗಳಿಂದ ಹೈದರಾಬಾದ್ನ ಪಂಚತಾರ ಹೊಟೇಲ್ನಲ್ಲಿ ತಂಗಿದ್ದ ಬಿಜೆಪಿ ಭಿನ್ನಮತೀಯ ಶಾಸಕರು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಬಾವುಟಗಳನ್ನು ಹಿಡಿದಿದ್ದ ಸಾವಿರಾರು ಕಾರ್ಯಕರ್ತರು ಜಯಘೋಷಣೆಗಳೊಂದಿಗೆ ರಾಜ್ಯಕ್ಕಾಗಮಿಸಿದ ಶಾಸಕರನ್ನು ಸ್ವಾಗತಿಸಿದರು.
ಹಲವಾರು ಮಂದಿ ಹೂಗುಚ್ಚಗಳನ್ನು ನೀಡಿ ಶುಭ ಹಾರೈಸಿದರು. ಸಚಿವರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನೇತೃತ್ವದಲ್ಲಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಆನಂದಸಿಂಗ್, ಬೇಳೂರು ಗೋಪಾಲಕೃಷ್ಣ ಮತ್ತಿತರ ಶಾಸಕರು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಬಿಜೆಪಿಯಲ್ಲಿ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿದ್ದು, ಮುಂದಿನ ೫೦ ವರ್ಷಗಳ ವರೆಗೂ ಬಿಜೆಪಿಯೇ ಅಧಿಕಾರದಲ್ಲಿ ಮುಂದುವರಿಯುತ್ತದೆ. ತಾಯಿ ಸುಷ್ಮಾ ಸ್ವರಾಜ್ರ ಸಲಹೆಯಂತೆ ಮುಖ್ಯಮಂತ್ರಿ ಯೊಂದಿಗೆ ಕೈಜೋಡಿಸಿರುವುದಾಗಿ ಹೇಳಿದರು.
ಶಾಸಕರ ಹೈದರಾಬಾದ್ ಪ್ರವಾಸಕ್ಕೆ ಅವರ ಕ್ಷೇತ್ರಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶತಮಾನ ಕಾಣದಷ್ಟು ಭೀಕರ ನೆರೆ ಪರಿಸ್ಥಿತಿ ಉಂಟಾಗಿ ನೂರಾರು ಮಂದಿ ಸಾವನ್ನಪ್ಪಿದ ಸಂದರ್ಭದಲ್ಲೂ ಶಾಸಕರು ತಮ್ಮ ಜವಾಬ್ದಾರಿ ಮರೆತು ಪಂಚತಾರ ಹೊಟೇಲ್ನಲ್ಲಿ ತಂಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕ್ಷೇತ್ರದ ಮತದಾರರು ಟೀಕಿಸಿದ್ದಾರೆ.
ನೈತಿಕತೆ ಇರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರ ಪ್ರವೇಶಿಸಲಿ ಎಂದು ಹೊನ್ನಾಳ್ಳಿ ಕ್ಷೇತ್ರದ ಜನರು ರೇಣುಕಾರ್ಚಾರಿಗೆ ಸವಾಲು ಹಾಕಿದ್ದಾರೆ.
ಶೆಟ್ಟರನ್ನು ಭೇಟಿಯಾದ ಮುಖ್ಯಮಂತ್ರಿ

ಬೆಂಗಳೂರು: ಭಿನ್ನಮತೀಯ ನಾಯಕರೊಂದಿಗೆ ಸೇರಿಕೊಂಡು ಪರ್ಯಾಯ ನಾಯಕತ್ವ ವಹಿಸಲು ಮುಂಚೂಣಿಯಲ್ಲಿದ್ದ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ರನ್ನು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದರು.
ಬೆಂಗಳೂರಿನಲ್ಲಿ ತಂಗಿರುವ ಸಚಿವರೊಂದಿಗಿನ ಸಭೆಯ ನಂತರ ಗೃಹ ಸಚಿವ ವಿ.ಎಸ್.ಆಚಾರ್ಯ, ಬಿಜೆಪಿ ರಾಜ್ಯಾಧ್ಯಕ್ಷರೊಂದಿಗೆ ಶೆಟ್ಟರ್ ನಿವಾಸಕ್ಕೆ ತೆರಳಿದ ಯಡಿಯೂರಪ್ಪ ಕೆಲ ಕಾಲ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸೌಜನ್ಯದ ಭೇಟಿಯಷ್ಟೆ ಎಂದು ನುಡಿದರು.
ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿ ಯಡಿಯೂರಪ್ಪನವರಿಂದ ದೂರ ಸರಿದರು.
ರೆಡ್ಡಿ ಯೋಜನೆಗಳಿಗೆ ಬೆಂಬಲ: ಯಡಿಯೂರಪ್ಪ
ಬೆಂಗಳೂರು: ಕಂದಾಯ ಸಚಿವ ಕರುಣಾಕರ ರೆಡ್ಡಿಯವರೊಡಗೂಡಿ ನೆರೆ ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳುವುದಲ್ಲದೆ, ಅವರ ಎಲ್ಲ ಯೋಜನೆಗಳಿಗೆ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಭಿನ್ನಮತ ಬಗೆಹರಿದಿರುವ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳ ವರೆಗೆ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಈ ಕುರಿತು ಬಿಜೆಪಿ ಹೈಕಮಾಂಡ್ ಕೂಡ ತಮಗೆ ಭರವಸೆ ನೀಡಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ತಮ್ಮ ನಿವಾಸದಲ್ಲಿ ಬೆಂಗಳೂರಿನಲ್ಲಿ ತಂಗಿರುವ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಗ್ರಹಿಕೆಯಿಂದ ರೆಡ್ಡಿ ಸಹೋದರರು ಮತ್ತು ತಮ್ಮ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಈಗ ಎಲ್ಲವೂ ಬಗೆಹರಿದಿದೆ ಇದರಿಂದ ತಮ್ಮ ಶಕ್ತಿ ವೃದ್ದಿಯಾಗಿದ್ದು ನಾನೀಗ ೧೮ ವರ್ಷದ ಯುವಕನಂತಾಗಿದ್ದೇನೆ ಎಂದು ಹೇಳಿದರು.
ಹೊಸದಿಲ್ಲಿಯಲ್ಲಿ ನಡೆದ ಒಂಡಂಬಡಿಕೆಯನ್ನು ಬಹಿರಂಗವಾಗಿ ಹೇಳುವುದು ಸೂಕ್ತವಲ್ಲ. ಇನ್ನು ಮುಂದೆ ಯಾವುದೇ ಸಮಸ್ಯೆಗಳು ಉದ್ಭವಿಸಿದರು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳುತ್ತೇವೆ. ಸಮಿತಿಯು ಮುಖ್ಯಮಂತ್ರಿ ವಿವೇಚನೆಗೊಳಪಡುವ ವಿಷಯಗಳಿಗೆ ಹೊರತಾಗಿ ಚರ್ಚೆ ನಡೆಸುತ್ತದೆ. ಇದರಿಂದ ಮುಖ್ಯಮಂತ್ರಿ ಕರ್ತವ್ಯಕ್ಕೆ ಅಡ್ಡಿಯಾಗುವುದಿಲ್ಲಎಂದು ಅವರು ಸ್ಪಷ್ಟನೆ ನೀಡಿದರು.
ಸಂಪುಟ ಸಬೆ ಕರೆದು ಎಲ್ಲ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ. ಈವರೆಗೆ ತಾವು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಕೆಲಸ ಮಾಡಿದ್ದೇನೆ. ಆದರೂ, ಕೆಲವರು ತಮ್ಮನ್ನು ನಿರ್ಲಕ್ಷಿಸಿರುವುದಾಗಿ ಹೇಳಿದ್ದಾರೆ. ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ ಎಂದು ಅವರು ಹೇಳಿದರು.
ಅದಿರು ಸಾಗಾಣಿಕೆಯ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಿರುವುದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬುದನ್ನು ಅಲ್ಲಗಳೆದ ಅವರು, ಬಿಕ್ಕಟ್ಟು ಈಗ ಪರಿಹಾರವಾಗಿದೆ.
ಇನ್ನು ಮುಂದೆ ಅಭಿವೃದ್ಧಿ ಕುರಿತು ಚಿಂತಿಸುತ್ತೇವೆ. ನೆರೆ ಸಂತ್ರಸ್ಥರಿಗೆ ಪುರ್ನವಸತಿ ಕಲ್ಪಿಸಲು ಎಲ್ಲರೂ ಒಟ್ಟಾಗಿ ಭೂಮಿ ಪೂಜೆ ನೇರವೇರಿಸುವುದಾಗಿ ಅವರು ಹೇಳಿದರು.
11ರಂದು ಸಚಿವ ಸಂಪುಟ ಸಭೆ: ಗೃಹ ಸಚಿವ ಡಾ. ಆಚಾರ್ಯ
ಬೆಂಗಳೂರು: ಇತ್ತೀಚಿನ ಬಿಕ್ಕಟ್ಟಿನಿಂದ ಬಿಜೆಪಿಯ ವರ್ಚಸ್ಸಿಗೆ ಧಕ್ಕೆಯಾಗಿರುವುದು ನಿಜ ಎಂದು ಒಪ್ಪಿಕೊಂಡಿರುವ ಗೃಹ ಸಚಿವ ವಿ.ಎಸ್.ಆಚಾರ್ಯ, ಇನ್ನು ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಮಧ್ಯಾಹ್ನ ೩ ಗಂಟೆಗೆ ಸಚಿವ ಸಂಪುಟ ಸಭೆ ಕರೆಯಲಾಗಿದ್ದು ಎಲ್ಲರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ನಂತರ ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಮೂರು ದಿನಗಳಲ್ಲಿ 10 ಕಾರ್ಯಕ್ರಮಗಳು ನಿಗದಿಯಾಗಿವೆ ಎಂದು ಹೇಳಿದರು.
ಬಿಕ್ಕಟ್ಟು ಸರಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟು ಮಾಡಿದೆ. ಆದರೆ, ಈಗ ಎಲ್ಲವೂ ಸರಿಯೋಗಿರುವುದರಿಂದ ಸರಕಾರ ಸ್ಥಿರವಾಗಿದೆ ಎಂದರು. ಆಪರೆಷನ್ ಕಮಲದಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬುದನ್ನು ಅಲ್ಲಗಳೆದ ಅವರು, ಆಗಿನ ಸಂದರ್ಭದಲ್ಲಿ ಸ್ಥಿರ ಸರಕಾರಕ್ಕೆ ಆಪರೆಷನ್ ಕಮಲ ಅನಿವಾರ್ಯವಾಗಿತ್ತು ಎಂದಿದ್ದಾರೆ.
ರೆಡ್ಡಿಗಳ ಹಸ್ತಕ್ಷೇಪದ ಭೀತಿಯಿಂದಲೇ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಹಿಂಜರಿದಿದ್ದೆ: ಎಚ್ಡಿಕೆ
ಬೆಂಗಳೂರು: ರೆಡ್ಡಿ ಸಹೋದರರು ಸುಭದ್ರ ಆಡಳಿತ ನಡೆಸಲು ಅವಕಾಶ ನೀಡುವುದಿಲ್ಲ ಎಂಬ ಕಾರಣಕ್ಕಾಗಿ ಅಂದು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಇದನ್ನು ರಾಜ್ಯದ ಜನತೆಗೆ ಕೂಡ ಈಗ ಅರ್ಥಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನುಡಿದಿದ್ದಾರೆ.
ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡ ನಂತರ ಅವರು ಮಾತನಾಡಿದರು.
ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ೨೦ ತಿಂಗಳ ಕಾಲ ನನ್ನ ನೇತೃತ್ವದಲ್ಲಿ ಆಡಳಿತ ನಡೆಸಿದೆ. ನನ್ನ ಆಡಳಿತಾವಧಿಯಲ್ಲೂ ಬಳ್ಳಾರಿ ಗಣಿ ದೊರೆಗಳು ೧೫೦ ಕೋಟಿ ರೂ. ಹಗರಣ, ಕೊಲೆ ದೂರು ದಾಖಲಿಸುವುದು ಹೀಗೆ ಅನೇಕ ಕಿರುಕುಳ ನೀಡಿದರು. ಇವ್ಯಾವುದಕ್ಕೂ ಎದೆಗುಂದದೆ ಉತ್ತಮವಾದ ಆಡಳಿತ ನೀಡಿದೆ ಎಂದು ಕುಮಾರಸ್ವಾಮಿ ವಿವರಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಿದ್ದರೆ ರೆಡ್ಡಿ ಸಹೋದರರು ಸುಭದ್ರ ಆಡಳಿತ ನಡೆಸಲು ಅವಕಾಶ ನೀಡುವುದಿಲ್ಲ.
ಅಧಿಕಾರ ಹಸ್ತಾಂತರ ಮಾಡಬೇಡಿ ಎಂದಿದ್ದರು. ಅವರು ನೀಡಿದ ಸಲಹೆಯಂತೆ ನಡೆದುಕೊಂಡೆ. ಈಗ ತಮ್ಮದೆ ಸರಕಾರವನ್ನು ಅಸ್ಥಿರಗೊಳಿಸಲು ರೆಡ್ಡಿ ಸಹೋದರರು ಮುಂದಾಗಿದ್ದಾರೆ. ಇದರಿಂದ ಬಿಜೆಪಿ ಬಣ್ಣ ಬಯಲಾಗಿದೆ. ರಾಜ್ಯ ಜನvಗೆ ಅಂದು ನಾನು ಉತ್ತಮವಾದ ತೀರ್ಮಾನವನ್ನೆ ತೆಗೆದುಕೊಂಡಿದೆ ಎಂಬುದು ಮನವರಿಕೆಯಾಗಿದೆ ಎಂದು ಕುಮಾರಸ್ವಮಿ ಹೇಳಿದರು.
10 ದಿನಗಳಲ್ಲಿ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂಧಿಸದಿದ್ದರೆ ಉಗ್ರ ಹೋರಾಟ: ರಾಜ್ಯ ಬಿಜೆಪಿ ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರಾದ ರೆಡ್ಡಿ ಸಹೋದರರ ನಡುವೆ ಕಳೆದ 15 ದಿನಗಳಿಂದ ನಡೆದ ನಾಟಕದಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.
ಈಗ ಬಿಜೆಪಿ ಸರಕಾರದಲ್ಲಿನ ಬಿಕ್ಕಟ್ಟು ಶಮನಗೊಂಡಿದೆ. ಕೂಡಲೆ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸರಕಾರ ಕೂಡಲೆ ಸ್ಪಂಧಿಸಬೇಕು. ಆ ಭಾಗದಲ್ಲಿ ಸಮರೋಪಾಧಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ನನ್ನ ಕುಟುಂಬಕ್ಕೆ ಸೇಡಿನ ರಾಜಕಾರಣ ಗೊತ್ತಿಲ್ಲ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಚ್.ಡಿ.ದೇವೇಗೌಡ ಮಾತನಾಡಿ, ನಾನು ಸೇರಿದಂತೆ ಕುಮಾರಸ್ವಾಮಿ, ರೇವಣ್ಣ ಮುಂತಾದವರ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪ ಮಾಡಿದರು. ಎಲ್ಲ ನೋವನ್ನು ಸಹಿಸಿಕೊಂಡು ಬಂದಿದ್ದೇನೆ ಹೊರತು, ಅವರಿಗೆ ಕೆಡಕನ್ನು ಬಯಸಲಿಲ್ಲ. ನನಗೆ ಹಾಗೂ ನನ್ನ ಕುಟುಂಬಕ್ಕೆ ಸೇಡಿನ ರಾಜಕಾರಣ ಗೊತ್ತಿಲ್ಲ. ಆದರೆ ನೋವಿನ ರಾಜಕಾರಣ ಏನೆಂದು ಮಾತ್ರ ತಿಳಿದಿದ್ದೇನೆ ಎಂದು ನುಡಿದರು.
ಮುಂದಿನ ಪೀಳಿಗೆಗೆ ನನ್ನ ಬಗ್ಗೆ ತಿಳಿಸುವ ಸಲುವಾಗಿ, ಸದ್ಯದಲ್ಲೆ ನನ್ನ ಜೀವನ ಚರಿತ್ರೆಯನ್ನು ಬರೆಯಲು ಪ್ರಾರಂಭಿಸುತ್ತೇನೆ. ಇದರಲ್ಲಿ ರಾಜಕೀಯ ಜೀವನದಲ್ಲಿ ನಾನು ಅನುಭವಿಸಿದ ನೋವುಗಳು ಒಳಗೊಂಡಿರುತ್ತದೆ ಎಂದು ದೇವೇಗೌಡ ಹೇಳಿದರು.
ರಾಜ್ಯದಲ್ಲಿ ಯಡ್ಡಿ-ರೆಡ್ಡಿ ಬಣಗಳ ಸಮ್ಮಿಶ್ರ ಸರಕಾರ: ಸಿದ್ದು ಲೇವಡಿ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ಥಿತ್ವದಲ್ಲಿಲ್ಲ. ಬದಲಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗಣಿಧಣಿ ಜನಾರ್ದನ ರೆಡ್ಡಿ ಬಣಗಳ ಸಮ್ಮಿಶ್ರ ಸರಕಾರ ಆಡಳಿತದಲ್ಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಲೇವಡಿ ಮಾಡಿದ್ದಾರೆ.
ಸೋಮವಾರ ನಗರದ ಅರಮನೆ ಮೈದಾನಲ್ಲಿ ಕೆಪಿಸಿಸಿಯಿಂದ ಆಯೋಜಿಸಲಾಗಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 15 ದಿನಗಳ ಕಾಲ ರಾಜ್ಯದಲ್ಲಿ ಸರಕಾರವೇ ಇರಲಿಲ್ಲ. ಈ ಸರಕಾರ ಜನರಿಗೆ ದ್ರೋಹ ಬಗೆದಿದೆ. ಗಣಿಧಣಿಗಳ ಒತ್ತಡಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಪೂರ್ಣ ಶರಣಾಗಿದ್ದಾರೆ ಎಂದು ಗುಡುಗಿದರು.
ಬಿಜೆಪಿ ಪಕ್ಷ ಮತ್ತು ಅದರ ಹೈಕಮಾಂಡ್ ನೈತಿಕತೆ ಕಳೆದುಕೊಂಡಿದ್ದು, ದಿವಾಳಿಯ ಹಂತಕ್ಕೆ ತಲುಪಿದೆ. ಯಡಿಯೂರಪ್ಪ ಈ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ವ್ಯಂಗವಾಡಿದ ಸಿದ್ಧರಾಮಯ್ಯ, ಬಿಜೆಪಿ ಸರಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ಅಭಿವೃದ್ಧಿ ಕಾರ್ಯ ಗಳಿಗೆ ಸರಕಾರದ ಬಳಿ ಬಿಡಿಗಾಸಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ರಾಜ್ಯದ ಜನರನ್ನು ಸಾಲದ ಸುಳಿಗೆ ಸಿಲುಕಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಅನುದಾನ ಬರದೇ ಹೋಗಿದ್ದರೆ ಯಾವುದೇ ರೀತಿಯ ‘ಕನಿಷ್ಠ’ಅಭಿವೃದ್ಧಿ ಕಾರ್ಯಕ್ರಮಗಳಿಗೂ ಜನರಿಗೆ ದೊರಕುತ್ತಿರಲಿಲ್ಲ. ಆಡಳಿತ ಯಂತ್ರ ಕುಸಿದಿದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಸರಿಪಡಿಸಲು ಮುಂಬರುವ ಯಾವುದೇ ಸರಕಾರಕ್ಕೆ ಎರಡು ವರ್ಷಗಳ ಕಾಲ ಹಿಡಿಯುತ್ತದೆ ಎಂದು ಕಿಡಿಕಾರಿದ ಸಿದ್ಧರಾಮಯ್ಯ, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಮಹತ್ವದ ಜವಾಬ್ದಾರಿ ಇದೆ ಎಂದು ಹೇಳಿದರು.
ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯದ ಜೊತೆಗೆ ನೆರೆ ಸಂತ್ರಸ್ತರಿಗೆ ಕಾರ್ಯಕರ್ತರು ನೆರವಾಗಬೇಕು. ಸರಕಾರದ ನೆರೆ ಪರಿಹಾರ ಕಾರ್ಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪಮಾಡಿದ ಅವರು, ಬೂತ್ ಮಟ್ಟದಿಂದಲೇ ಹೆಚ್ಚು-ಹೆಚ್ಚು ಕಾರ್ಯಕರ್ತರನ್ನು ನೋಂದಣಿ ಮಾಡುವ ಮೂಲಕ ರಾಷ್ಟ್ರ ಮಟ್ಟದ ನಾಯಕತ್ವಕ್ಕೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂಗಾರದ ಗಳಿಗೆ ಒದಗಿಬಂದಿದ್ದು, ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಕರೆ ಮಾಡಿದರು.
ಕೇಂದ್ರ ಸರಕಾರ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರಕಾರ ಆಸ್ಥೆ ತೋರುತ್ತಿಲ್ಲ. ಯುಪಿಎ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷತೆ ವಹಿಸಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಕರ್ತರು ನಿಗಾವಹಿಸಬೇಕು ಎಂದು ಶಿವಕುಮಾರ್ ಸಲಹೆ ಮಾಡಿದರು.
ಸಭೆಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ಎಐಸಿಸಿ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಆಸ್ಕರ್ ಫೆರ್ನಾಂಡಿಸ್, ಎಐಸಿಸಿ ಕಾರ್ಯದರ್ಶಿ ಶಾಂತಾರಾಂ ನಾಯಕ್, ರಾಜ್ಯಸಭಾ ಉಪ ಸಭಾಪತಿ ಕೆ.ರೆಹಮಾನ್ಖಾನ್, ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಮುಖಂಡರಾದ ಸಿ.ಎಂ. ಇಬ್ರಾಹಿಂ, ಅಲ್ಲಂ ರಭದ್ರಪ್ಪ, ಎಚ್.ಕೆ.ಪಾಟೀಲ್, ಎನ್.ಎ. ಹ್ಯಾರಿಸ್, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಬೈರೇಗೌಡ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
ಸಮನ್ವಯ ಸಮಿತಿ ರಚನೆ ಸಂವಿಧಾನ ಬಾಹಿರ: ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಸರಕಾರ ಆಡಳಿತಾತ್ಮಕ ಸಮನ್ವಯ ಸಮಿತಿ ರಚಿಸಿಕೊಂಡಿರು ವುದು ಸಂವಿಧಾನ ಬಾಹಿರ. ಇದರಿಂದ ಮುಖ್ಯಮಂತ್ರಿ ಅಧಿಕಾರ ಮೊಟಕುಗೊಳಿಸುವ ಪ್ರಯತ್ನವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖಂಡ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾg ರೊಂದಿಗೆ ಮಾತನಾಡಿದ ಅವರು, ಯುಪಿಎ ಸರಕಾರ ಪಕ್ಷಗಳ ಮಧ್ಯೆ ಸಮನ್ವಯ ಸಮಿತಿ ರಚಿಸಿಕೊಂಡಿದೆ. ಆಡಳಿತಾತ್ಮಕವಾಗಿ ಯಾವುದೇ ಸಮಿತಿಯನ್ನು ರಚಿಸಿಕೊಂಡಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಅಧಿಕಾರದಾಸೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪೂರ್ಣವಾಗಿ ಬಳ್ಳಾರಿಯ ಗಣಿಧಣಿಗಳಿಗೆ ಶರಣಾಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನವನ್ನು ರೆಡ್ಡಿಗಳಿಗೆ ಒತ್ತೆ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಬಿಜೆಪಿ ಹೈಕಮಾಂಡ್ ಮುಂದೆ ಯಾವ-ಯಾವ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದನ್ನು ಯಡಿಯೂರಪ್ಪ ಜನರಿಗೆ ವಿವರಿಸಬೇಕು ಎಂದು ಒತ್ತಾಯಿಸಿದರು.
ಕಳೆದ 15 ದಿನಗಳಿಂದ ರಾಜ್ಯದ ನೆರೆ ಸಂತ್ರಸ್ತರಿಗೆ ದ್ರೋಹ ಮಾಡಲಾಗಿದೆ. ಈ ಬಗ್ಗೆ ಎಂದು ದುಃಖಿಸದ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸಂಪುಟದ ಸಹೋದ್ಯೋಗಿಯೊಬ್ಬರನ್ನು ಕೈಬಿಟ್ಟು ಮತ್ತು ಅಧಿಕಾರಿಯನ್ನು ವರ್ಗಾವಣೆ ಮಾಡಿದ ಕಾರಣಕ್ಕೆ ದುಃಖಪಟ್ಟಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಅದಿರು ಸಾಗಾಣೆ ಮಾಡುವ ಲಾರಿಗಳ ಮೇಲೆ ವಿಧಿಸಲಾಗಿದ್ದ ಸುಂಕ ಹಿಂಪಡೆಯಲು ಯಡಿಯೂರಪ್ಪ ಮುಂದಾಗಿದ್ದಾರೆ. ಸಚಿವ ಸಂಪುಟದ ನಿರ್ಧಾರವನ್ನು ಹೇಗೆ ಹಿಂಪಡೆ ಯಲು ಸಾಧ್ಯ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಸಂಪುಟದಿಂದ ಕೈಬಿಟ್ಟದ್ದು, ಬಳ್ಳಾರಿ ಮತ್ತು ಗದಗ ಜಿಲ್ಲೆ ಅಧಿಕಾರಿಗಳ ವರ್ಗಾವಣೆ ಆದೇಶ ರದ್ಧು ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಜನತೆಗೆ ಸ್ಪಷ್ಟಣೆ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.